ಪಾರ್ಕಿನ್‍ಸನ್ನನ ಕಾಯಿಲೆ - 
ನಡುಹರೆಯದವರಲ್ಲಿ ಕಾಣಿಸಿಕೊಳ್ಳುವ, ಸೆಕೆಂಡಿಗೆ 3 ರಿಂದ 8 ರ ವರೆಗಿನ ತೀವ್ರ ನಡುಕದಿಂದ ಒಡಗೂಡಿರುವ ವ್ಯಾಧಿ. ಪಾರ್ಕಿನ್ಸೋನಿಸಮ್ ಎಂದು ಹೇಳುವುದು ವಾಡಿಕೆ. ಇಂಗ್ಲೆಂಡಿನ ವೈದ್ಯ ಜೇಮ್ಸ್ ಪಾರ್ಕಿನ್‍ಸನ್ (1755-1824) ಇದನ್ನು ಮೊದಲಿಗೆ ಗುರುತಿಸಿ ವಿವರಿಸಿದನಾದ್ದರಿಂದ ಈ ಹೆಸರು. ಗಂಡಸರನ್ನು ಹೆಚ್ಚಾಗಿ ಪೀಡಿಸುವ ವ್ಯಾಧಿ ಇದು.

ಪಾರ್ಕಿನ್‍ಸನ್ನನ ಕಾಯಿಲೆ ಪ್ರಾರಂಭದಲ್ಲಿ ಅಗೋಚರವಾಗಿದ್ದು ಸ್ವಲ್ಪಸ್ವಲ್ಪವಾಗಿ ಮುಂದುವರಿಯುವುದು. ದೇಹದ ಸಂಯೋಜಿತ ಚಲನೆಗಳ ಮತ್ತು ಗಂಡಸುತನದ ನಾಶ ರೋಗದ ಪ್ರಾರಂಭ ಲಕ್ಷಣಗಳು. ಮಿದುಳಿನ ಬುಡದಲ್ಲಿರುವ ನರಗಂಟುಗಳು ಕ್ಷಯಿಸುವುದೇ ಇದರ ಕಾರಣ. 50-60 ವಯಸ್ಸಿನವರಲ್ಲಿ ರೋಗ ದೇಹದ ಅದಿರಾಟದಿಂದ ಕಾಣಿಸಿಕೊಳ್ಳುತ್ತದೆ. ಬೆರಳುಗಳ ಚಲನೆ ಗುಳಿಗೆಯನ್ನು ಉಂಡೆ ಮಾಡುವ ರೀತಿಯಲ್ಲಿರುವುದು. ದೇಹದ ಅದಿರಾಟ ಕೈ ಅಥವಾ ಕಾಲಿನಲ್ಲಿ ಪ್ರಾರಂಭವಾಗಿ ಇತರ ಭಾಗಗಳಿಗೂ ನಿಧಾನವಾಗಿ ಹಬ್ಬುವುದು. ಅನಂತರ ಶರೀರದಲ್ಲಿ ಒಂದು ರೀತಿಯ ಗಂಡಸುತನ ಏರ್ಪಟ್ಟು ನಿಲವು ಮತ್ತು ನಡಿಗೆಗಳಲ್ಲಿ ಗಮನಾರ್ಹ ಬದಲಾವಣೆ ಆಗುವುದು: ನಿಶ್ಚಲವಾಗಿರುವಾಗ ಒರಟು ನಿಲುವು ಮತ್ತು ಮುಖದಲ್ಲಿ ಮುಸುಕು ಧರಿಸಿದಂಥ ಲಕ್ಷಣಗಳು ಎದ್ದು ಕಾಣುವುವು. ದೇಹದ ಬಗ್ಗಿದ ನಿಲವು ಕಾಲೆಳೆದುಕೊಂಡು ಹತ್ತಿರ ಹತ್ತಿರ ಹೆಜ್ಜೆ ಹಾಕುವಿಕೆ, ನಿಧಾನದ ನಡಿಗೆ, ನಡೆಯುವಾಗ ಕೈಗಳು ದೇಹದ ಮುಂದೆ ಜೋತು ಬಿದ್ದಿರುವುದು, ಸಣ್ಣ ಅಕ್ಷರಗಳ ಬರವಣಿಗೆ, ಕೈಯಿಂದ ಮಾಡುವ ಕಾರ್ಯಗಳು ಒಂದೊಂದಾಗಿ ಕಡಿಮೆಯಾಗುವಿಕೆ ಇತ್ಯಾದಿ ಈ ರೋಗದ ಮುಖ್ಯ ಲಕ್ಷಣಗಳು. ಆದರೆ ಬುದ್ಧಿಶಕ್ತಿ ಮತ್ತು ಜ್ಞಾನೇಂದ್ರಿಯಗಳು ಅಳಿಯದಂತೆ ಜೋಪಾನವಾಗಿರುವಂತೆ ಕಾಣುವುವು.
(ಕೆ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ